ಮಾಂಟಾನ  -	ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ರಾಜ್ಯ. ಉತ್ತರದಲ್ಲಿ ಕೆನಡ, ದಕ್ಷಿಣದಲ್ಲಿ ವೈವೊಮಿನ್ ಮತ್ತು ಪಶ್ಚಿಮದಲ್ಲಿ ಇಡಾಹೊ. ಪೂರ್ವದಲ್ಲಿ ಉತ್ತರ ಮತ್ತು ದಕ್ಷಿಣ ಡಕೋಟ ರಾಜ್ಯಗಳು ಇದರ ಮೇರೆಗಳಾಗಿವೆ. 4017, ಚ.ಕಿಮೀ ಒಳಜಲಪ್ರದೇಶ ಸೇರಿದಂತೆ ಇದರ ವಿಸ್ತೀರ್ಣ 3,81.088 ಚಕಿಮೀ, ಜನಸಂಖ್ಯೆ 786-690 (1980), ರಾಜಧಾನಿ ಹೆಲೆನ.

	ಭೌತಲಕ್ಷಣ : ಮಾಂಟಾನ ಎಂಬ ಹೆಸರು 'ಪರ್ವತಗಳು ಎಂದು ಅರ್ಥವಿರುವ ಸ್ಪಾನಿಷ್ ಪದದಿಂದ ಬಂದಿದೆ. ಇಲ್ಲಿಯ ಹಿಮಾಚ್ಛಾದಿತ ಪರ್ವತಗಳಡಿ ಹುದುಗಿರುವ ಚಿನ್ನ, ಬೆಳ್ಳಿ, ಮುಂತಾದ ಅಮೂಲ್ಯ ಖನಿಜಗಳಿಂದಾಗಿ ಇದಕ್ಕೆ 'ಟ್ರಷರ್ ಸ್ಟೇಟ್ ಕೂಡಿದ ನಾಡು. ರಾಕಿಪರ್ವತಗಳು ರಾಜ್ಯದ ಪಶ್ಚಿಮ ಪ್ರದೇಶದ ಬಹುಭಾಗವನ್ನು ಆಕ್ರಮಿಸಿವೆ. ಇಲ್ಲಿಯ ಉನ್ನತ ಪರ್ವತ ಶ್ರೇಣಿಗಳು ಅಸಾಮಾನ್ಯ ಪ್ರಕೃತಿದೃಶ್ಯಗಳನ್ನು ನಿರ್ಮಿಸಿವೆ. ನಡುವೆ ಇರುವ ಮಟ್ಟಸ ಬಯಲುಗಳಲ್ಲಿ ದಟ್ಟವಾಗಿ ಹುಲ್ಲು ಬೆಳೆಯುವುದು. ಪರ್ವತವಲಯದ ಕಾಡುಗಳು ಕಣಿವೆಗಳು 50ರಿಂದ 60 ಕಿಮೀಗಳಷ್ಟು ವಿಸ್ತಾರವಾಗಿವೆ. ಈಶಾನ್ಯಭಾಗದಲ್ಲಿ ಆತ್ಯಂತ ಕಿರಿದಾದ ಕಣಿವೆಗಳೂ ಇವೆ.

	ರಾಜ್ಯದಲ್ಲಿ ಸುಮಾರು 50 ಪರ್ವತಶ್ರೇಣಿಗಳಿದ್ದು ಪರ್ವತಳ ಮೇಲೆ ವರ್ಷದಲ್ಲಿ ನಾಲ್ಕರಿಂದ ಆರು ತಿಂಗಳ ತನಕ ಹಿಮ ಮುಚ್ಚಿರುತ್ತದೆ. ಕೆಲವು ಶಾಶ್ವತ ಹಿಮ ಪ್ರದೇಶಗಳಿದ್ದು ಕೆಲವಡೆ ಹಿಮಪ್ರವಾಹಗಳಿವೆ. ಪಾರ್ಕ್‍ಕೌಂಟಿಯ ಗ್ರಾನೆಟ್ ಶಿಖರ (3912ಮೀ) ಅತ್ಯಂತ ಎತ್ತರವಾದುದ್ದು. ಈ ವಲಯದಲ್ಲಿ ಆಗಾಗ್ಗೆ ಭೂಕಂಪನಗಳಾಗುವುದುಂಟು. ಮಾಂಟಾನದ ಪೂರ್ವಭಾಗ ವಿಶಾಲವಾದ ಹುಲ್ಲುಗಾವಲುಗಳ ಬಯಲುಗಳಿಂದ ಕೂಡಿದೆ. ಇದು ವ್ಯವಸಾಯಕ್ಕೂ ಯೋಗ್ಯವಾಗಿದೆ.

	ಜಲಸಂಪತ್ತು: ಈ ರಾಜ್ಯದ ಪರ್ವತ ವಲಯದಲ್ಲಿ ಹಿಮಗಡ್ಡೆಗಳಿಂದಾಗಿ ಸಾವಿರಾರು ಸಣ್ಣಪುಟ್ಟ ಶೀತ ಸರೋವರಗಳು ಉಂಟಾಗಿವೆ. ಈ ಘಟ್ಟಶ್ರೇಣಿಗಳಿಂದ ಹಲವಾರು ಹರಿಯುತ್ತದೆ. ಅವುಗಳಲ್ಲಿ ಮಿಸೊರಿ ನದಿ (3,726 ಕಿಮೀ) ಮುಖ್ಯವಾದುದು. ಯೆಲ್ಲೊಸ್ಟೋನ್ ಇದರ ಉಪನದಿ. ಇದಲ್ಲದೆ ಜಫರ್‍ಸನ್, ಮ್ಯಾಡಿಸನ್, ಗ್ಯಾಲಟನ್, ಮಿಲ್ಕಸನ್, ಮಾರಿಯಸ್ ಮತ್ತು ಟೆಟನ್ ಮೊದಲಾದವು ಮಾಂಟಾನದಲ್ಲಿ ಹುಟ್ಟಿ ಮಿಸೊರಿ ನದಿ ಸೇರುತ್ತದೆ. ಮಾಂಟಾನದಲ್ಲಿ ಪರ್ವತಶ್ರೇಣಿಗಳು ಪಶ್ಚಿಮದತ್ತಲೂ ನೀರಿನ ಹರಿವನ್ನು ಉಂಟು ಮಾಡಿವೆ. ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಕೂಟ್‍ನೆ ಮತ್ತು ಕ್ಲಾಕ್‍ಫೋರ್ಕ್ ನದಿಗಳು ಮುಖ್ಯವಾದವು. ಫ್ಲಾಟ್ ಹೆಡ್ ಲೇಕ್ ಮಾಂಟಾನದಿ ಅತಿ ದೊಡ್ಡ ಸರೋವರ ಇಲ್ಲಿಯ ಫೋರ್ಕ್‍ಫೆಕ್ ಲೇಕ್ ಮಾನವ ನಿರ್ಮಿತ ಅತಿದೊಡ್ಡ ಸರೋವರ.

	ಮಣ್ಣು: ರಾಜ್ಯದ ಉತ್ತರ ಭಾಗ ಹಿಮ ಪ್ರವಾಹ ತಂದು ಹಾಕಿದ ಮಣ್ಣಿನಿಂದ ಕೂಡಿದೆ. ದಕ್ಷಿಣಭಾಗದ ಹೆಚ್ಚಿನ ನೆಲ ಬಹಳ ವರ್ಷಗಳ ಹಿಂದೆ ಆವರಿಸಿದ್ದ ಕಣಿವೆಗಳಲ್ಲಿ ಮೆಕ್ಕಲುಮಣ್ಣು ಶೇಖರವಾಗಿದೆ. ಮಾಂಟಾನದ ನೈರುತ್ಯ ಭಾಗದಲ್ಲಿ ಪ್ರಾಚೀನ ಜ್ವಾಲಾಮುಖಿಗಳ ಸ್ಪೋಟಗಳಿಂದ ಕೂಡಿದ ಫಲವತ್ತಾದ ಮಣ್ಣು ಇದೆ.

	ವಾಯುಗುಣ: ಇಲ್ಲಿಯದು ವಿಭಿನ್ನ ವಾಯುಗುಣ. ಪಶ್ಚಿಮ ಭಾಗದಲ್ಲಿ ಪೂರ್ವಭಾಗಕ್ಕಿಂತ ಬೇಸಗೆ ತಂಪಾಗಿಯೂ ಚಳಿಗಾಲ ಬೆಚ್ಚಗೂ ಇರುತ್ತದೆ. ಜನವರಿಯಲ್ಲಿ 7.8(ಛಿ ಉಷ್ಣತೆ ಇದ್ದರೆ ಜುಲೈಯಲ್ಲಿ 20.6(ಛಿ ಇರುತ್ತದೆ. ಪಶ್ಚಿಮದ ಸೆರಗನ್ನು ಬಿಟ್ಟರೆ ರಾಜ್ಯದ ಬಹುಭಾಗದಲ್ಲಿ ವಾರ್ಷಿಕವಾಗಿ 33ರಿಂದ 36 ಸೆಂಮೀ ಮಳೆಯಾಗುತ್ತದೆ.

	ಖನಿಜ: ಕಲ್ಲಿದ್ದಲು,  ತಾಮ್ರ ಮತ್ತು ಪೆಟ್ರೋಲಿಯಮ್ ಅಪಾರ ಪ್ರಮಾಣದಲ್ಲಿ ದೊರೆಯುತ್ತದೆ. ಸುಮಾರು 1.8 ಬಿಲಿಯನ್ ಮೆಟ್ರಿಕ್‍ಟನ್‍ಗಳಷ್ಟು ಉತ್ತಮ ಕಲ್ಲಿದ್ದಲ ನಿಕ್ಷೆಪವಿದೆ. ಬ್ಯೂಟಿ ಬಳಿ ಭಾರಿ ತಾಮ್ರನಿಕ್ಷೇಪವಿದೆ. ಪೆಟ್ರೋಲಿಯಮ್ ನಿಕ್ಷೇಪ 200ಮಿಲಿಯನ್ ಬ್ಯಾರೆಲ್‍ಗಳಿಗೂ ಅಧಿಕವಿದೆ. ಅನೇಕ ಕಡೆಗಳಲ್ಲಿ ಸ್ವಾಭಾವಿಕ ಅನಿಲದೊರೆತಿದೆ. ಚಿನ್ನ ಮತ್ತು ಬೆಳ್ಳಿಗಳ ಗಣಿಗಳಿಗ ಮಾಂಟಾನ ಪ್ರಸಿದ್ದ. 1862ರಲ್ಲಿ ಇಲ್ಲಿ ಚಿನ್ನವನ್ನು ಪತ್ತೆ ಹಚ್ಚಲಾಯಿತು. ರಾಜಧಾನಿ ಹೆಲೆನ ಇರುವ ಪ್ರದೇಶದಲ್ಲೇ ಚಿನ್ನದ ಗಣಿಯಿತ್ತು. ಸೀಸ, ಕ್ರೋಮೈಟ್, ಸುಣ್ಣಕಲ್ಲು, ಮಾಂಗ್ಯನೀಸ್, ಫಾಸ್ಪೇಟ್, ಟಂಗ್‍ಸ್ಪನ್, ಯುರೇನಿಯಮ್ ಮೊದಲಾದ ಖನಿಜಗಳೂ ಇವೆ.

	ಸಸ್ಯಸಂಪತ್ತು: ರಾಜ್ಯದ ಭಾಗ ಪ್ರದೇಶದಲ್ಲಿ ಸ್ವಾಭಾವಿಕ ಹುಲ್ಲುಗಾವಲಿದೆ. ಈಗಲೂ ರಾಜ್ಯದ ಸುಮಾರು ಅರ್ಧಭಾಗವನ್ನು ಹುಲ್ಲುಗಾವಲುಗಳಾಗಿ ಬಳಸಲಾಗುತ್ತದೆ. ರಾಜ್ಯದ ಭಾಗದಲ್ಲಿ (9.3 ಮಿಲಿಯನ್ ಹೆಕ್ಟೇರ್) ಅರಣ್ಯಗಳಿವೆ. ಸುಮಾರು 2.8 ಮಿಲಿಯನ್ ಹೆಕ್ಟೇರ್ ಮೀಸಲು ಪ್ರದೇಶವಿದೆ.

	ಪ್ರಾಣಿಸಂಪತ್ತು: ಅಪಾರ ಸಂಕುಲಕ್ಕೆ ಇಲ್ಲಿಯ ಅರಣ್ಯಗಳು ಆಶ್ರಯ ಒದಗಿಸಿವೆ. ಪರ್ವತ ಪ್ರದೇಶ ಮತ್ತು ಬಯಲುಗಳೆರಡರಲ್ಲೂ ಜಿಂಕೆಗಳು ಕಂಡುಬರುತ್ತವೆ. ಕವಲುಗೊಂಬಿನ ಸಾರಂಗ ಮತ್ತು ಚಿಗರಿಗಳು ಬಯಲುಗಳಲ್ಲಿವೆ. ಕರಡಿ, ಕಡವೆ, ಮೇಕೆ, ಬೆಟ್ಟದಕುರಿ, ಎಲ್ಕ್ ಇವು ಇತರ ಮುಖ್ಯ ಕಾಡುಪ್ರಾಣಿಗಳು. ನೂರಾರು ದೊಡ್ಡ ಮತ್ತು ಸಣ್ಣ ಜಾತಿಯ ಪಕ್ಷಿಗಳಿವೆ. ಅಪಾರ ಮತ್ಸ್ಯಸಂಪತ್ತಿದೆ.

	ವ್ಯವಸಾಯ: ಮಾಂಟಾನದ ಒಟ್ಟು ಉತ್ಪನ್ನಗಳ ಅರ್ಧದಷ್ಟು ಮೌಲ್ಯ ವ್ಯವಸಾಯೋತ್ಪನ್ನದ್ದು. 1000 ಹೆಕ್ಟೇರುಗಳಷ್ಟು ವಿಸ್ತೀರ್ಣವುಳ್ಳ ಸುಮಾರು 25,000 ಫಾರಮ್‍ಗಳಿವೆ. ಕೆಲವು 2,800 ಹೆಕ್ಟೇರುಗಳಷ್ಟು ವಿಸ್ತಾರವಾಗಿವೆ. ವ್ಯವಸಾಯೋತ್ಪನ್ನದಲ್ಲಿ ಭಾಗ ಜಾನುವಾರು ಉತ್ಪನ್ನವಾಗಿದೆ. ಸುಮಾರು 3 ಮಿಲಿಯನ್ ಜಾನುವಾರುಗಳಿದ್ದು ಫಾರಮ್‍ಗಳ ಬಹುಭಾಗ ಇವುಗಳ ಸಾಕಣೆಗೆ ಬಳಕೆಯಾಗುತ್ತಿದೆ. ಮೊಟ್ಟೆ, ಕೋಳಿಗಳು, ಹಾಲು ಮತ್ತು ಉಣ್ಣೆ ಉತ್ಪನ್ನವೂ ಗಣನೀಯವಾಗಿದೆ. ಮಾಂಟಾನ ಅಮೆರಿಕದ ಪ್ರಮುಖ ಗೋದಿ ಉತ್ಪಾದನಾ ರಾಜ್ಯ ಜೊತೆಗೆ ಬಾರ್ಲಿ, ಆಲೂಗೆಡ್ಡೆ ಮತ್ತು ಸಿಹಿಗೆಣಸು ಇತರ ಬೆಳೆಗಳು. ತರಕಾರಿಗಳನ್ನೂ ಹಣ್ಣುಗಳನ್ನೂ ಹೇರಳವಾಗಿ ಬೆಳೆಸುತ್ತಾರೆ.

	ಕೈಗಾರಿಕೆ: ಮರದ ನಾಟಾ ಉತ್ಪನ್ನ ಮಾಂಟಾನದ ಮುಖ್ಯ ಕೈಗಾರಿಕೆ. ಸುಮಾರು 200 ಮರಕೊಯ್ಯುವ ಕಾರ್ಖಾನೆಗಳಿವೆ. ಕಾಗದ ತಯಾರಿಕಾ ಕಾರ್ಖಾನೆಗಳಿವೆ. ಬಿಲ್ಲಿಂಗ್ಸ್ ಮತ್ತು ಸಿಡ್ನಿಯಲ್ಲಿ ಸಕ್ಕರೆ ಶುದ್ಧಿಕರಣ ಘಟಕಗಳಿಗೆ ಗೋದಿಯಿಂದ ಹಿಟ್ಟನ್ನು ತಯಾರಿಸುವ ಹಗೂ ಮಾಂಸೋತ್ಪನ್ನಗಳನ್ನು ಡಬ್ಬಗಳಿಗೆ ತುಂಬುವ ಉದ್ಯಮಗಳಿವೆ. ಲೋಹ ಹದಮಾಡುವ ಮತ್ತು ಯಂತ್ರ ತಯಾರಿಕಾ ಕೇಂದ್ರಗಳಿವೆ. ತೈಲಶುದ್ಧೀಕರಣ ಹಾಗೂ ಸಿಮೆಂಟ್ ಕಾರ್ಖಾನೆಗಳಿವೆ. ಮುದ್ರಣ ಮತ್ತು ಪ್ರಕಾಶ ಉದ್ಯಮ ಕ್ರಿಯಾಶೀಲವಾಗಿದೆ.

	ಗಣಿ ಕೈಗಾರಿಕೆ ಈ ರಾಜ್ಯದ ಬೃಹತ್ ಉದ್ಯಮ. ರಾಕಿ ಪರ್ವತ ಶ್ರೇಣಿಯಲ್ಲಿ ಪೆಟ್ರೋಲ್ ಬಾವಿಗಳು ಹೇರಳವಾಗಿವೆ. ಒಟ್ಟು ಲೋಹೋತ್ಪನ್ನದ ಮೌಲ್ಯದಲ್ಲಿ ತಾಮ್ರದ ಉತ್ಪಾದನೆ ಶೇಕಡಾ 90ರಷ್ಟಾಗುತ್ತದೆ. ಬ್ಯೂಟಿ ಪ್ರದೇಶದಲ್ಲಿ ತಾಮ್ರ, ಚಿನ್ನ ಮತ್ತು ಬೆಳ್ಳಿ ವಿಶೇಷವಾಗಿ ದೊರೆಯುತ್ತದೆ. ಅನೇಕ ಕಡೆಗಳಲ್ಲಿ ಸುಣ್ಣ ಮತ್ತು ಕಲ್ಲಿದ್ದಲು ಗಣಿಗಳಿವೆ. ಅನಕೊಂಡದಲ್ಲಿ ಅತ್ಯಂತ ದೊಡ್ಡ ತಾಮ್ರದ ಕಾರ್ಖಾನೆಯಿದೆ.

	ಜಲ ಮತ್ತು ಪೆಟ್ರೋಲಿಯಮ್ ಚರಟ ಮತ್ತು ಕಲ್ಲಿದ್ದಲಿಂದ ವಿದ್ಯುತ್ ಉತ್ಪಾದನೆಯಲ್ಲಿ ಮಾಂಟಾನ ಮುಖ್ಯಸ್ಥಾನ ಪಡೆದಿದೆ. 1027 ಮೆಗವಾಟ್ ವಿದ್ಯುತ್ (1983) ಉತ್ಪಾದಿಸಲಾಗುತ್ತಿತ್ತು.

	ಬಿಲ್ಲಿಂಗ್ಸ್ (66,798). ಗ್ರೇಟ್ ಫಾಲ್ಸ್ (56,725) ಮತ್ತು ಹೆಲೆನಗಳು (23,938) ರಾಜ್ಯದ ದೊಡ್ಡ ಪಟ್ಟಣಗಳಾಗಿವೆ.

	ಸಾರಿಗೆ ಸಂಪರ್ಕ: ಮಾಂಟಾನದಲ್ಲಿ 130,000 ಕಿಮೀಗಳಿಗೂ ಹೆಚ್ಚು ಉದ್ದದ ರಸ್ತೆಗಳಿವೆ. ಬಿಲ್ಲಿಂಗ್ಸ್ ಮತ್ತು ಗ್ರೇಟ್ ಫಾಲ್ಸ್‍ಗಳು ವಾಣಿಜ್ಯ ವಿಮಾನ ಕೇಂದ್ರಗಳು 8,000 ಕಿಮೀ ರೈಲುಮಾರ್ಗವಿದೆ. ಆರು ರೈಲು ಮಾರ್ಗಗಳು ಸರಕು ರವಾನೆ ಮಾಡುತ್ತವೆ. 126 ವಿಮಾನ ನಿಲ್ದಾಣಗಳಿವೆ.

	ಮಾಂಟಾನದಲ್ಲಿ 15 ದೈನಿಕಗಳು ಸೇರಿದಂತೆ 85 ಸುದ್ದಿ ಪತ್ರಿಕೆಗಳು ಪ್ರಸಾರದಲ್ಲಿವೆ. ಬಿಲ್ಲಿಂಗ್ಸ್ ಗೆಜೆಟ್, ಗ್ರ್ರೇಟ್ ಫಾಲ್ಸ್ ಟ್ರಿಬ್ಯೂನ್ ಇವು ಅತ್ಯಧಿಕ ಪ್ರಸಾರದ ಪತ್ರಿಕೆಗಳು. ಮೊದಲ ಆಕಾಶವಾಣಿ ಕೇಂದ್ರ ಬ್ಯೂಟಿನಲ್ಲಿ 1953ರಲ್ಲಿ ಪ್ರಾರಂಭವಾಯಿತು. ಮೊದಲ ದೂರದರ್ಶನ  ಕೇಂದ್ರ ಬ್ಯೂಟಿನಲ್ಲಿ 1953ರಲ್ಲಿ ಪ್ರಾರಂಭವಾಯಿತು. ಇಂದು ರಾಜ್ಯದಲ್ಲಿ ಸುಮಾರು 60 ಆಕಾಶವಾಣಿ ಕೇಂದ್ರಗಳು 12 ದೂರದರ್ಶನ ಕೇಂದ್ರಗಳೂ ಇವೆ.

	ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಂಟಾನದಲ್ಲಿ 9 ವಿಶ್ವವಿದ್ಯಾಲಯಗಳಿವೆ. ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ 152,335(1982) ವಿದ್ಯಾರ್ಥಿಗಳಿದ್ದಾರೆ. 61 ಆಸ್ಪತ್ರೆಗಳಿವೆ. 4 ಮಾನಸಿಕ ಚಿಕಿತ್ಸಾ ಕೇಂದ್ರಗಳಿವೆ.

	 ಆಡಳಿತ: ಮಾಂಟಾನ ಅಮೆರಿಕ ಸಂಯುಕ್ತ ಸಂಸ್ಥಾನಗಳ ಫೆಡರಲ್ ವ್ಯವಸ್ಥೆಗೆ ಸೇರಿದ ರಾಜ್ಯ. ಇಲ್ಲಿ ಸೆನಟ್ ಮತ್ತು ಪ್ರತಿನಿಧಿ ಸಭೆಗಳಿವೆ. ಸೆನೆಟ್ 50 ಸದಸ್ಯರನ್ನು ಒಳಗೊಂಡಿರುತ್ತದೆ. ಇವರ ಅಧಿಕಾರ ಅವಧಿ 4 ವರ್ಷ. ಪ್ರತಿನಿಧಿ ಸಭೆ 100 ಸದಸ್ಯರನ್ನು ಒಳಗೊಂಡಿರುತ್ತದೆ. ಇವರ ಅಧಿಕಾರ ಅವಧಿ 2 ವರ್ಷ. ಕಾರ್ಯಾಂಗಕ್ಕೆ ಗವರ್ನರ್ ಮತ್ತು ಲೆಫ್ಟಿನೆಂಟ್ ಗವರ್ನರ್‍ಗಳನ್ನು 4 ವರ್ಷಗಳ ಅವಧಿಗೆ ಚುನಾಯಿಸಲಾಗುತ್ತದೆ. ಈ ರಾಜ್ಯದಿಂದ ಫೆಡರಲ್ ಕಾಂಗ್ರೆಸ್‍ಗೆ ಇಬ್ಬರು ಸೆನೆಟರು ಮತ್ತು ಇಬ್ಬರು ಪ್ರತಿನಿಧಿ ಸಭಾ ಸದಸ್ಯರು ಹೋಗುತ್ತಾರೆ. ರಾಜ್ಯವನ್ನು 50 ಕೌಂಟಿಗಳಾಗಿ ವಿಂಗಡಿಸಲಾಗಿದೆ.

	ಇತಿಹಾಸ: ಐರೋಪ್ಯರು ಇಲ್ಲಿಗೆ ಬರುವ ಮೊದಲ ಅನೇಕ ರೆಡ್ ಇಂಡಿಯನ್ ಪಂಗಡಗಳವರು ಇಲ್ಲಿ ವಾಸಿಸುತ್ತಿದ್ದರು. 1780ರ ದಶಕದಲ್ಲಿ ಫ್ರೆಂಚ್ ಸಾಹಸಿಗರು ಮಾಂಟಾನವನ್ನು ಪ್ರವೇಶಿಸಿದರು. 1847ರಲ್ಲಿ ಮಿಸೊರಿ ನದಿಯ ದಡದ ಮೇಲೆ ಪೋರ್ಟ್‍ಬೆಂಟನ್ ನೆಲೆ ನಿರ್ಮಿಸಿದರು. 1846ರಲ್ಲಿ ಅರೆಗಾನ್ ಒಪ್ಪಂದದ ಮೇಲೆ ಇಂಗ್ಲೆಂಡ್ ಮಾಂಟಾನದ ವಾಯುವ್ಯ ಭಾಗವನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟಿತು. 1862ರಲ್ಲಿ ಮಾಂಟಾನದಲ್ಲಿ ಚಿನ್ನವನ್ನು ಶೋಧಿಸಿದ ಮೇಲೆ ವಲಸೆ ಪ್ರಮಾಣ ಹೆಚ್ಚಿತು. 1877ರ ವೇಳೆಗೆ ರೆಡ್ ಇಂಡಿಯನ್ ಪಂಗಡಗಳು ಫಡರಲ್ ಸೈನ್ಯಕ್ಕೆ ಅಂತಿಮವಾಗಿ ಶರಣಾದವು. 1899ರ ನವೆಂಬರ್ 8ರಂದು ಮಾಂಟಾನ ಅಮೆರಿಕ ಸಂಯುಕ್ತ ಸಂಸ್ಥಾನಗಳ 41ನೆಯ ರಾಜ್ಯವಾಗಿ ಸೇರಿತು.

	ಮಾಂಟಾನದಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಗ್ರೇಟ್‍ಫಾಲ್ಸ್  ಹತ್ತಿರ ಜಯಂಟ್ ಸ್ಟ್ರಿಂಗ್ಸ್ ಎಂಬ ನಿಮಿಷಕ್ಕೆ 27,0000 ಗ್ಯಾಲನ್ ನೀರನ್ನು ಚಿಮ್ಮುವ ಊಟೆ ಇದೆ. ಮಾಂಟಾನ ಪ್ರಕೃತಿ ದೃಶ್ಯಗಳಿಗೆ ಹೆಸರಾದುದು. ಗ್ಲ್ಲೇಸಿಯರ್ ನ್ಯಾಷನಲ್ ಪಾರ್ಕ್ ಬಳಿ ಹಿಮ ಪ್ರವಾಹಗಳ ಅಪೂರ್ವನೋಟ ಸಿಗುತ್ತದೆ. ಗ್ರೇಟ್‍ಫಾಲ್ಸ್ ಆಫ್ ಮಿಸೊóóರಿಯಲ್ಲಿ 14ಕಿಮೀ ಅಂತರದಲ್ಲಿ 120 ಮೀ ಆಳಕ್ಕೆ ನದಿ ದುಮುಕುತ್ತದೆ. ಯೆಲ್ಲೊಸ್ಟೋನ್ ನ್ಯಾಷನಲ್ ಪಾರ್ಕ್ ಪ್ರಾಣಿಧಾಮವಾಗಿದೆ.
	(ಡಿ. ಎಸ್. ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ